ಪ್ರಿಯತಮೆಗೆ ಭಾರೀ ಮೊತ್ತದ ನೂರಾರು ದುಬಾರಿ ಗಿಫ್ಟ್‌ಗಳನ್ನು ಕಳುಹಿಸಿ ಸೇಡು ತೀರಿಸಿಕೊಂಡ ಮಾಜಿ ಪ್ರಿಯಕರ- ಹೇಗೆ ಗೊತ್ತಾ?
Friday, April 11, 2025
ಮಾಜಿ ಪ್ರಿಯತಮೆಗೆ ಕ್ಯಾಶ್ ಆನ್ ಡೆಲಿವರಿ ಮೂಲಕ ದುಬಾರಿ ಮೊತ್ತದ ನೂರಾರು ಗಿಫ್ಟ್ ಕಳುಹಿಸುವ ಮೂಲಕ ಸೇಡು ತೀರಿಸಿಕೊಂಡಿರುವ ವಿಲಕ್ಷಣ ಘಟನೆಯೊಂದು ಪಶ್ಚಿಮ ಬಂಗಾಳದ ನೊಯ್ಡಾದಲ್ಲಿ ವರದಿಯಾಗಿದೆ.
ತನ್ನ ಮಾಜಿ ಪ್ರಿಯಕರ ಕ್ಯಾಶ್ ಆನ್ ಡೆಲಿವರಿ(ಹಣ ಪಾವತಿ ಬಳಿಕ ವಸ್ತು ತಗೆದುಕೊಳ್ಳೋದು) ಗಿಫ್ಟ್ ಕಳುಹಿಸುವ ಮೂಲಕ ನಿರಂತರ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಯುವತಿ ದೂರು ದಾಖಲಿಸಿದ್ದಳು. ಈ ಹಿನ್ನೆಲೆಯಲ್ಲಿ ಆತನನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.
24 ವರ್ಷದ ಬ್ಯಾಂಕ್ ಉದ್ಯೋಗಿಯಾಗಿರುವ ಸಂತ್ರಸ್ತೆ ಲೇಕ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆರೋಪಿ ಹಲವಾರು ದಿನಗಳಿಂದ ಕ್ಯಾಶ್-ಆನ್-ಡೆಲಿವರಿ ಪ್ಯಾಕೇಜ್‌ಗಳನ್ನು ಕಳುಹಿಸುತ್ತಿದ್ದರಿಂದ ನಿರಂತರ ಕಿರುಕುಳ ಉಂಟಾಗಿದೆ ಮತ್ತು ಅಮೆಜಾನ್ ಮತ್ತು ಪ್ಲಿಪ್‌ಕಾರ್ಟ್‌ನಂತಹ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಆಕೆಯ ಖಾತೆಗಳನ್ನು ನಿರ್ಬಂಧಿಸಿವೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ವರದಿಯ ಪ್ರಕಾರ, ಪೊಲೀಸರು ಆರಂಭದಲ್ಲಿ ಆಕೆಯ ಸಹೋದ್ಯೋಗಿಗಳು ಎಂದು ಶಂಕಿಸಿದ್ದಾರೆ. ಬಳಿಕ ಆಕೆಯ ಮಾಜಿ ಗೆಳೆಯ 25 ವರ್ಷದ ಸುಮಾನ್ ಸಿಕ್ಸರ್ ಎಂದು ಗುರುತಿಸಲಾಗಿದೆ. ಕಳೆದ ವರ್ಷ ನವಂಬರ್‌ನಿಂದ ಈ ವರೆಗೆ 300ಕ್ಕೂ ಅಧಿಕ ಗಿಫ್ಟ್ ಕಳುಹಿಸಿದ್ದಾನೆ.
ಈ ಜೋಡಿ ಇತ್ತೀಚೆಗೆ ಬೇರ್ಪಟ್ಟಿತು. ಆದರೆ, ಇದನ್ನು ಸಹಿಸಲಾಗದೆ, ಸಿಕ್ಸರ್ ಸೇಡಿನ ಕ್ರಮವಾಗಿ ಆಕೆಗೆ ಭಾರೀ ಮೊತ್ತದ ಪಾರ್ಸೆಲ್‌ಗಳನ್ನು ಕಳುಹಿಸಲು ಪ್ರಾರಂಭಿಸಿದ್ದನು. ಪ್ರಿಯತಮೆ ಆನ್‌ಲೈನ್ ಶಾಪಿಂಗ್ ಅನ್ನು ಇಷ್ಟಪಡುತ್ತಿದ್ದಳು. ಅಲ್ಲದೆ ಪ್ರೀತಿಯಲ್ಲಿದ್ದ ವೇಳೆ ಆಕೆ ಸದಾ ತನ್ನಿಂದ ಉಡುಗೊರೆಗಳನ್ನು ಬೇಡುತ್ತಿದ್ದಳು. ಆದರೆ ಅದನ್ನು ಭರಿಸಲು ಅವನಿಗೆ ಸಾಧ್ಯವಾಗಲಿಲ್ಲ. ಇದರಿಂದ ಇಬ್ಬರು ಬೇರ್ಪಟ್ಟಿದ್ದರು ಎಂದು ಸಿಕ್ಸರ್ ಹೇಳಿದ್ದಾರೆ.
ಪಾರ್ಸೆಲ್ ಬುಕ್ ಮಾಡಿ, ಅಪರಿಚಿತ ಸಂಖ್ಯೆಗಳಿಂದ ಸಂದೇಶ ಮತ್ತು ಕರೆಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದಾಗಿ ಸಿಕ್ಸರ್ ಒಪ್ಪಿಕೊಂಡಿದ್ದಾನೆ.