ಬೇರೆ ಜಾತಿಯ ಯುವಕನನ್ನು ಮದುವೆಯಾದ ಅಪ್ರಾಪ್ತೆ- ಪುತ್ರಿಯನ್ನೇ ಹತ್ಯೆಗೈದ ತಾಯಿ
Monday, April 14, 2025
ವಿಜಯವಾಡ: ಬೇರೆ ಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾದ ಅಪ್ರಾಪ್ತ ಪುತ್ರಿಯನ್ನು ತಾಯಿಯೇ ಹತ್ಯೆ ಮಾಡಿರುವ ಘಟನೆ ತಿರುಪತಿ ಜಿಲ್ಲೆಯಲ್ಲಿ ನಡೆದಿದೆ.
16ರ ಅಪ್ರಾಪ್ತೆಯನ್ನು ಬೇರೆ ಜಾತಿಗೆ ಸೇರಿದ 20 ವರ್ಷದ ಯುವಕ ಮೂರು ವರ್ಷದಿಂದ ಪ್ರೀತಿಸುತ್ತಿದ್ದ. ಇವರ ಪ್ರೀತಿಗೆ ಎರಡೂ ಕುಟುಂಬಗಳಿಂದಲೂ ವಿರೋಧವಿತ್ತು. ಆದರೂ ಅಪ್ರಾಪ್ತ ವಯಸ್ಸಿನ ಈ ಯುವ ಜೋಡಿ ಕಳೆದ ವರ್ಷ ವಿವಾಹ ಬಂಧನಕ್ಕೆ ಒಳಗಾಗಿತ್ತು. ಇದರಿಂದ ಕುಪಿತಗೊಂಡ ಯುವತಿಯ ತಾಯಿ ಯುವಕನ ವಿರುದ್ಧ ಪೊಲೀಸ್ ದೂರು ನೀಡಿದ್ದರು. ಪೊಲೀಸರು ಯುವಕನನ್ನು ಪೊಕ್ಸೊ ಕಾಯ್ದೆಯಡಿ ಬಂಧಿಸಿದ್ದರು ಎಂದು ಡಿಎಸ್ಪಿ ಬೇತಪುಡಿ ಪ್ರಸಾದ್ ವಿವರ ನೀಡಿದ್ದಾರೆ.
ಈ ಮಧ್ಯೆ ಯುವತಿ ಗರ್ಭಿಣಿಯಾಗಿದ್ದಾಳೆ. ಬಳಿಕ ತಾಯಿಯ ಬಲವಂತದಿಂದ ಗರ್ಭಪಾತ ಮಾಡಿಸಿಕೊಂಡಿದ್ದಳು. ಯುವಕ ತಿಂಗಳ ಹಿಂದೆ ಜಾಮೀನಿನಲ್ಲಿ ಬಿಡುಗಡೆಯಾಗಿದ್ದ. ಎಪ್ರಿಲ್ 4ರಂದು ಯುವತಿ ಆತನನ್ನು ದೂರವಾಣಿ ಮೂಲಕ ಸಂಪರ್ಕಿಸುವ ಪ್ರಯತ್ನ ಮಾಡಿದ್ದಳು. ಇದರಿಂದ ಕೋಪಗೊಂಡ ತಾಯಿ ತನ್ನ ಪುತ್ರಿಯನ್ನು ಉಸಿರುಗಟ್ಟಿಸಿ ಸಾಯಿಸಿದ್ದಾಳೆ. ಪುತ್ರಿಯನ್ನು ಕೊಂದ ತಾಯಿ ಕೆಲವೇ ಗಂಟೆಗಳಲ್ಲಿ ಸ್ವರ್ಣಮುಖಿ ನದಿಯ ದಂಡೆಯಲ್ಲಿ ಅಂತ್ಯಸಂಸ್ಕಾರವನ್ನೂ ನೆರವೇರಿಸಿದ್ದಾಳೆ. ಇದೀಗ ಆರೋಪಿತೆ 34 ವರ್ಷದ ತಾಯಿಯನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ತರಾತುರಿಯಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದ್ದು ಹಲವು ಅನುಮಾನಗಳಿಗೆ ಕಾರಣವಾಗಿತ್ತು. ಎಪ್ರಿಲ್ 9ರಂದು ಕಂದಾಯ ಅಧಿಕಾರಿಗಳು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ಆರಂಭಿಸಿದಾಗ ಮಹಿಳೆ ಮನೆಯಿಂದ ಪರಾರಿಯಾಗಿದ್ದಳು. ಶುಕ್ರವಾರ ಗ್ರಾಮದ ಹಿರಿಯರ ಸಮ್ಮುಖದಲ್ಲಿ ಮಹಿಳೆ ಶರಣಾಗಿದ್ದು, ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾಳೆ. ಸಿಟ್ಟು, ಭಯ ಮತ್ತು ಸಾಮಾಜಿಕ ಒತ್ತಡದಿಂದ ಈ ಕೃತ್ಯ ಎಸಗಿದ್ದಾಗಿ ಮಹಿಳೆ ಹೇಳಿದ್ದಾಳೆ.