ಪ್ರಿಯತಮನೊಂದಿಗೆ ಸೇರಿ ಪತಿಯ ಉಸಿರನ್ನೇ ನಿಲ್ಲಿಸಿದ ಯೂಟ್ಯೂಬರ್
Thursday, April 17, 2025
ಚಂಡಿಗಡ: ಇಲ್ಲಿನ ಭಿವಾನಿ ಎಂಬಲ್ಲಿ ಯೂಟ್ಯೂಬರ್ ಪ್ರಿಯಕನೊಂದಿಗೆ ಸೇರಿ ಪತಿಯನ್ನೇ ಕೊಲೆಗೈದ ಪ್ರಕರಣದಲ್ಲಿ ಬೆಚ್ಚಿ ಬೀಳಿಸುವ ಸಿಸಿಟಿವಿ ದೃಶ್ಯಾವಳಿಯೊಂದು ಬೆಳಕಿಗೆ ಬಂದಿದೆ. ವೀಡಿಯೋದಲ್ಲಿ ಮಹಿಳಾ ಯೂಟ್ಯೂಬರ್ ತನ್ನ ಪ್ರಿಯಕರನೊಂದಿಗೆ ಸೇರಿಕೊಂಡು ಪತಿಯ ಶವವನ್ನು ಚರಂಡಿಗೆ ಎಸೆಯುವ ಮುನ್ನ ಅದನ್ನು ಬೈಕ್‌ನಲ್ಲಿ ಸಾಗಿಸಿರುವುದು ಕಂಡು ಬಂದಿದೆ.
ರೇವಾರಿ ನಿವಾಸಿ ಯೂಟ್ಯೂಬರ್ ರವೀನಾ(28) ಮತ್ತು ಆಕೆಯ ಪ್ರಿಯಕರ ಕಂಟೆಂಟ್ ಕ್ರಿಯೇಟರ್ ಸುರೇಶ್ ಕೊಲೆ ಆರೋಪಿಗಳು. ಮಾ.25ರಂದು ಭಿವಾನಿಯ ಮನೆಯಲ್ಲಿ ಅವರಿಬ್ಬರೂ ಆಪ್ತ ಕ್ಷಣಗಳನ್ನು ಅನುಭವಿಸುತ್ತಿದ್ದಾಗ ರವೀನಾ ಪತಿ ಪ್ರವೀಣ್(32) ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಈ ವೇಳೆ ವಾಗ್ವಾದ ನಡೆದು ಇಬ್ಬರೂ ಸೇರಿ ಪ್ರವೀಣ್‌ನನ್ನು ಉಸಿರುಗಟ್ಟಿಸಿ ಕೊಲೆಗೈದಿದ್ದಾರೆ. ಬಳಿಕ ಮೃತದೇಹವನ್ನು ಬಟ್ಟೆಯಲ್ಲಿ ಸುತ್ತಿ ಬೈಕ್‌ನಲ್ಲಿ ಸಾಗಿಸಿ ನಗರದ ಹೊರವಲಯದ ರಸ್ತೆಬದಿಯ ಚರಂಡಿಗೆ ಎಸೆದಿದ್ದಾರೆ.
ಪ್ರವೀಣ್ ನಾಪತ್ತೆ ಬಳಿಕ ತನಿಖೆ ಕೈಗೆತ್ತಿಕೊಂಡಿದ್ದ ಪೋಲೀಸರು ದಂಪತಿಯ ಮನೆ ಪರಿಸರ ಮತ್ತು ಶವ ಪತ್ತೆಯಾಗಿದ್ದ ಪ್ರದೇಶಗಳಲ್ಲಿಯ ನೂರಾರು ಸಿಸಿಟಿವಿಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಆಘಾತಕಾರಿ ದೃಶ್ಯ ಬೆಳಕಿಗೆ ಬಂದಿತ್ತು. ಸಿಸಿಟಿವಿ ತುಣುಕು ಆರೋಪಿಗಳು ತಡರಾತ್ರಿ ಶವವನ್ನು ಬೈಕ್ ನಲ್ಲಿ ತಮ್ಮಿಬ್ಬರ ನಡುವೆ ಇಟ್ಟುಕೊಂಡು ಸಾಗಿಸುತ್ತಿದ್ದನ್ನು ತೋರಿಸಿದೆ.
ಪ್ರವೀಣ್ ಕೊಲೆಯನ್ನು ರವೀನಾ ಒಪ್ಪಿಕೊಂಡಿದ್ದು, ಆಕೆಯನ್ನು ಪೋಲಿಸರು ಬಂಧಿಸಿದ್ದಾರೆ. ಸುರೇಶ್ ಈಗಲೂ ತಲೆ ಮರೆಸಿಕೊಂಡಿದ್ದಾನೆ.
ರೇವಾರಿಯ ಜೂಡಿ ಗ್ರಾಮದ ನಿವಾಸಿ ರವೀನಾ ಮತ್ತು ಭಿವಾನಿಯ ಗುಜ್ರಂ ಕಿ ಧಾನಿ ನಿವಾಸಿ ಪ್ರವೀಣ್ ಮದುವೆ 2017ರಲ್ಲಿ ನಡೆದಿತ್ತು. ಪ್ರವೀಣ್ ವೃತ್ತಿಯಲ್ಲಿ ಚಾಲಕನಾಗಿದ್ದ. ದಂಪತಿಗೆ ಆರು ವರ್ಷದ ಪುತ್ರನಿದ್ದಾನೆ. ಕಳೆದ ಕೆಲವು ವರ್ಷಗಳಿಂದ ರವೀನಾ ಸಾಮಾಜಿಕ ಮಾಧ್ಯಮ ಚಟುವಟಿಕೆಗಳಲ್ಲಿ ಸಕ್ರಿಯಳಾಗಿದ್ದಳು. ಆದ್ದರಿಂದ ರವೀನಾ 18 ತಿಂಗಳ ಹಿಂದೆ ಇನ್‌ಸ್ಟಾಗ್ರಾಮ್‌ನಲ್ಲಿ ಹಿಸಾರ್‌ನ ಪ್ರೇಮನಗರ ಗ್ರಾಮದ ನಿವಾಸಿ ಯೂಟ್ಯೂಬರ್ ಸುರೇಶ್‌ನನ್ನು ಭೇಟಿಯಾಗಿದ್ದಳು. ಬಳಿಕ ಆತನೊಂದಿಗೆ ಸಲಿಗೆ ಹೆಚ್ಚಿದೆ.
ಈ ಸಲಿಗೆಯಿಂದಾಗಿ ರವೀನಾ ಹಾಗೂ ಪ್ರವೀಣ್ ವೈವಾಹಿಕ ಸಂಬಂಧ ಹಳಸಿತ್ತು. ಪ್ರವೀಣ್ ಪತ್ನಿ ಮತ್ತು ಸುರೇಶ್ ಗೆಳೆತನವನ್ನು ಆಕ್ಷೇಪಿಸಿದ್ದ. ಆದರೂ ಅವರು ತಮ್ಮ ಸಂಬಂಧವನ್ನು ಮುಂದುವರಿಸಿದ್ದರು. ಇದೀಗ ಈ ಸಂಬಂಧವೇ ಪ್ರವೀಣ್ ಕೊಲೆಗೆ ಕಾರಣವಾಗಿದೆ.