ಮದುವೆಯಾಗಲು ಪೀಡಿಸುತ್ತಿದ್ದ ಮಂಗಳಮುಖಿ: ಸ್ನೇಹಿತರೊಂದಿಗೆ ಸೇರಿ ಹತ್ಯೆ- ಮೂವರು ಅರೆಸ್ಟ್
Tuesday, April 29, 2025
ಬೆಂಗಳೂರು: ಇತ್ತೀಚೆಗಷ್ಟೇ ನಡೆದ ಮಂಗಳಮುಖಿ ತನುಶ್ರೀ ಕೊಲೆ ಪ್ರಕರಣವನ್ನು ಭೇದಿಸಿರುವ ಕೆ. ಆರ್.ಪುರ ಪೊಲೀಸರು, ಆಕೆಯ ಸ್ನೇಹಿತ ಸೇರಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕೆ.ಆರ್.ಪುರ ಸೀಗೇಹಳ್ಳಿ ನಿವಾಸಿ ಜಗದೀಶ್ (29), ಪ್ರಭಾಕರ್ (34) ಮತ್ತು ಸುಶಾಂತ್(32) ಬಂಧಿತ ಆರೋಪಿಗಳು.
ಎ.17ರಂದು ಮಂಗಳಮುಖಿ ತನುಶ್ರೀಯನ್ನು ಮಾರಕಾಸ್ತ್ರದಿಂದ ಕತ್ತು ಸೀಳಿ ಕೊಲೆಗೈದು ಪರಾರಿಯಾಗಿದ್ದರು. ಬಳಿಕ ಕಾರ್ಯಾಚರಣೆ ನಡೆಸಿದ ಪೊಲೀಸರು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳ ಪೈಕಿ ಜಗದೀಶ್ ತನುಶ್ರೀ ಸ್ನೇಹಿತನಾಗಿದ್ದ. ಈತನಿಗೆ ಈಗಾಗಲೇ ಮದುವೆಯಾಗಿ, ಒಂದು ಮಗು ಇದೆ. ವೃತ್ತಿಯಲ್ಲಿ ಕ್ಯಾಬ್ ಚಾಲಕನಾಗಿದ್ದಾನೆ. ಕಳೆದ 1 ವರ್ಷದ ಹಿಂದೆ ಸಾಮಾಜಿಕ ಕಾರ್ಯಕ್ರಮದಲ್ಲಿ ಮಂಗಳಮುಖಿ ತನುಶ್ರೀ ಪರಿಚಯವಾಗಿದ್ದ. ಬಳಿಕ ಸಮಾಜ ಸೇವೆ ಎಂದು ಬೇರೆ ಬೇರೆ ಊರುಗಳಿಗೆ ಇಬ್ಬರು ಜೊತೆಯಾಗಿ ಪ್ರಯಾಣಿಸುತ್ತಿದ್ದರು. ಆದ್ದರಿಂದ ಇಬ್ಬರು ಆತ್ಮೀಯವಾಗಿದ್ದು, ಜಗದೀಶ್, ಹೆಚ್ಚಾಗಿ ತನುಶ್ರೀ ಮನೆಯಲ್ಲೇ ಇರುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.
ಮನೆಯಲ್ಲೇ ಇರುತ್ತಿದ್ದ ಜಗದೀಶ್ ಮೇಲೆ ಮೋಹ ಹೆಚ್ಚಾಗಿದ್ದರಿಂದ ತನ್ನನ್ನು ಮದುವೆಯಾಗುವಂತೆ ಮಂಗಳಮುಖಿ ತನುಶ್ರೀ ಆರೋಪಿಗೆ ಒತ್ತಾಯಿಸು ತ್ತಿದ್ದಳು. ಇದಕ್ಕೆ ಜಗದೀಶ್ ನಿರಾಕರಿಸುತ್ತಿದ್ದ. ಆದ್ದರಿಂದ ಇಬ್ಬರ ನಡುವೆ ಕೆಲವೊಮ್ಮೆ ಜಗಳ ಕೂಡ ನಡೆಯುತ್ತಿತ್ತು. ತನುಶ್ರೀ ಕೂಡ ಬೆದರಿಕೆ ಹಾಕುತ್ತಿದ್ದಳು. ಇದರಿಂದ ಕೋಪಗೊಂಡ ಜಗದೀಶ್, ತನ್ನ ಸ್ನೇಹಿತರಾದ ಪ್ರಭಾಕರ್ ಮತ್ತು ಸುಶಾಂತ್‌ಗೆ ವಿಷಯ ತಿಳಿಸಿ, ತನುಶ್ರೀ ಹತ್ಯೆಗೆ ಸಂಚು ರೂಪಿಸಿದ್ದ. ಅದರಂತೆ ಎ.17ರಂದು ತನುಶ್ರೀ ಮನೆಯಲ್ಲೇ ಆಕೆಯೂ ಸೇರಿದಂತೆ ನಾಲ್ವರೂ ಮದ್ಯ ಪಾರ್ಟಿ ಮಾಡಿದ್ದಾರೆ. ಕಂಠಪೂರ್ತಿ ಮದ್ಯ ಸೇವಿಸಿದ್ದಾರೆ. ಬಳಿಕ ತನುಶ್ರೀಯನ್ನು ಚಾಕುವಿನಿಂದ ಕತ್ತು ಹಾಗೂ ದೇಹದ ಇತರೆ ಭಾಗ ಕೊಯ್ದು ಹತ್ಯೆಗೈದಿದ್ದಾರೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.
ವೈಟ್‌ಫೀಲ್ಡ್ ಉಪವಿಭಾಗದ ಎಸಿಪಿ ರೀನಾಸುವರ್ಣ, ಕೆ.ಆರ್.ಪುರ ಠಾಣೆ ಪಿಐ ರಾಮೂರ್ತಿ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಕೋಟ್ಯಧಿಪತಿಯಾಗಿದ್ದ ತನುಶ್ರೀ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತೆ ಆಗಿದ್ದರು. ಜತೆಗೆ ಸಂಗಮ ಎಂಬ ಎನ್‌ಜಿಒ ಕೂಡ ನಡೆಸುತ್ತಿದ್ದ ಅವರು ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು.
ಕೃತ್ಯ ಎಸಗಿದ ಬಳಿಕ ಆರೋಪಿ ಜಗದೀಶ್ ಮತ್ತು ಆತನ ಸಹಚರರ ತಿರುಪತಿಗೆ ತೆರಳಿ ಮುಡಿ ಕೊಟ್ಟಿದ್ದರು. ಬಳಿಕ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಪಟ್ಟಣಕ್ಕೆ ಬಂದು ಪರಿಚಯಸ್ಥರ ಮನೆಯಲ್ಲಿ ವಾಸವಾಗಿದ್ದರು. ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.