ಧರ್ಮ ಯಾವುದೆಂದು ಕೇಳಿದ ಉಗ್ರರು- ಮುಸ್ಲಿಂ ಅಲ್ಲವೆಂದು ಗೊತ್ತಾಗುತ್ತಿದ್ದಂತೆ ಗುಂಡಿನ ಮಳೆಗೆರೆದ ರಾಕ್ಷಸರು
Wednesday, April 23, 2025
ಶ್ರೀನಗರ: ಇಲ್ಲಿನ ಪ್ರಕೃತಿ ರಮಣೀಯ ಬೈಸರನ್ ಹುಲ್ಲುಗಾವಲು ಪ್ರದೇಶದಲ್ಲಿ ಮಂಗಳವಾರ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯ ಪರಿಣಾಮವಾಗಿ ಸಂಪೂರ್ಣಪ್ರದೇಶ ರಕ್ತಸಿಕ್ತವಾಗಿದೆ. ಉಗ್ರರ ಪೈಶಾಚಿಕ ದಾಳಿಯ ಪರಿಣಾಮ ಡಜನ್‌ಗೂ ಮಿಕ್ಕಿ ಪ್ರವಾಸಿಗರು ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಉಗ್ರರು ಪ್ರವಾಸಿಗರನ್ನು ಗುರಿಯಾಗಿಸಿ ಗುಂಡಿನ ಸುರಿಮಳೆಗೈದ ಪರಿಣಾಮವಾಗಿ ಹಲವರ ದೇಹ ಛಿದ್ರವಾಗಿ ರಕ್ತದ ಕೋಡಿಯೇ ಹರಿಯಿತು. ಜಮ್ಮು-ಕಾಶ್ಮೀರದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಾಗರಿಕರ ಮೇಲೆ ಉಗ್ರರು ನಡೆಸಿದ ಅತ್ಯಂತ ಘನಘೋರ ದಾಳಿ ಇದಾಗಿದೆ.
ದಾಳಿ ನಡೆದ ಬಳಿಕ ಹಲವರು ನಿಸ್ತೇಜರಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವ ದೃಶ್ಯಾವಳಿಗಳಂತೂ ಮನಕಲುಕುವಂತಿತ್ತು. ದಾಳಿಯಲ್ಲಿ ಪಾರಾದ ಕೆಲವರು ತಮ್ಮ ಕುಟುಂಬಸ್ಥರಿಗಾಗಿ ಹುಡುಕಾಡುತ್ತಿದ್ದ ಹಾಗೂ ದಾಳಿಯ ವೇಳೆ ಗಾಯಗೊಂಡ ತಮ್ಮವರ ರಕ್ಷಣೆಗಾಗಿ ಅಂಗಲಾಚುತ್ತಿದ್ದ ದೃಶ್ಯಗಳಂತೂ ಕರುಣಾಜನಕವಾಗಿತ್ತು.
ನನ್ನ ಪತಿಯನ್ನು ಮುಸ್ಲಿಂ ಅಲ್ಲವೆಂಬ ಕಾರಣಕ್ಕಾಗಿ ಗುಂಡಿಕ್ಕಲಾಯಿತು. ಉಗ್ರರು ನಮ್ಮ ಧರ್ಮ ಯಾವುದೆಂದು ಕೇಳಿದರು. ಮುಸ್ಲಿಂ ಅಲ್ಲ ಎಂದು ಗೊತ್ತಾದಾಗ ಗುಂಡಿನ ದಾಳಿ ನಡೆಸಿದರು ಎಂದು ದಾಳಿಯಿಂದ ಪಾರಾದ ಮಹಿಳೆಯೊಬ್ಬರು ಅಳುತ್ತಲೇ ನಡೆದ ಘಟನಾವಳಿಯನ್ನು ವಿವರಿಸಿದರು. ಗಾಯಗೊಂಡು ನೆಲದ ಮೇಲೆ ಬಿದ್ದಿದ್ದ ವ್ಯಕ್ತಿಯೋರ್ವರ ಪಕ್ಕದಲ್ಲಿ ದಾಳಿಯ ವೇಳೆ ಪಾರಾದ ಮಗುವೊಂದು ಅಳುತ್ತಾ ಕುಳಿತಿದ್ದ ದೃಶ್ಯವಂತೂ ಯಾತನಾಮಯವಾಗಿತ್ತು.
“ಉಗ್ರರು ನನ್ನ ಅಪ್ಪನ ಮುಂದೆ ದು, ಇಸ್ಲಾಮಿಕ್‌ನ ಶ್ಲೋಕ ಹೇಳುವಂತೆ ಸೂಚಿಸಿದರು. ಅಪ್ಪ, ಗೊತ್ತಿಲ್ಲವೆಂದಾಗ ಅವರ ತಲೆಗೆ ಗುಂಡಿಕ್ಕಿದರು' ಎಂದು ಹೇಳುತ್ತಾ ಉಗ್ರರ ಗುಂಡಿಗೆ ಬಲಿಯಾದ ಪುಣೆಯ ಸಂತೋಷ್ ಜಗದಾಳೆ (54) ಅವರ ಪುತ್ರಿ 26ವರ್ಷದ ಅಸಾವರಿ ಕಣ್ಣೀರು ಸುರಿಸಿದ್ದಾರೆ.
ತಂದೆ-ತಾಯಿ ಸೇರಿದಂತೆ ನಾವು ಐವರು ಕಾಶ್ಮೀರಕ್ಲೆ ಬಂದಿದ್ದೆವು. ಕಣಿವೆಯ ಮೇಲ್ಭಾಗದಿಂದ ಸ್ಥಳೀಯರಂತೆ ಕಂಡುಬಂದ ಒಂದು ಗುಂಪು ಏಕಾಏಕಿ ಗುಂಡಿನ ದಾಳಿ ನಡೆಸುತ್ತಾ ಕೆಳಗಿಳಿದು ಬರುತ್ತಿತ್ತು. ಅದನ್ನು ನೋಡುತ್ತಿದ್ದಂತೆ ನಾವು ಭಯಭೀತರಾಗಿ ಒಂದು ಟೆಂಟ್‌ನೊಳಗೆ ಅಡಗಿಕೊಂಡೆವು. ನಾವು ಇದು ಉಗ್ರರು ಮತ್ತು ಯೋಧರ ನಡುವಿನ ಗುಂಡಿನ ಚಕಮಕಿ ಇರಬಹುದೆಂದು ಭಾವಿಸಿದ್ದೆವು. ಆದರೆ, ಸತ್ಯ ಏನೆಂದು ತಿಳಿಯಲು ಹೆಚ್ಚು ಹೊತ್ತು ಬೇಕಾಗಲಿಲ್ಲ. ನಮ್ಮ ಬಳಿ ಬಂದ ಉಗ್ರರು, “ಚೌಧರಿ ತೂ ಬಾಹರ್ ಆ ಜಾ' ಎಂದರು. ಆಗ ಅಪ್ಪ ಟೆಂಟ್‌ನಿಂದ ಹೊರಗೆ ಬಂದರು. ಆಗ, ಇಸ್ಲಾಮಿಕ್ ಶ್ಲೋಕ (ಕಲಿಮಾ) ಹೇಳುವಂತೆ ಸೂಚಿಸಿದರು. ಗೊತ್ತಿಲ್ಲ ಎಂದೊಡನೆ ಅಪ್ಪನ ತಲೆ, ಕಿವಿ ಮತ್ತು ಬೆನ್ನಿಗೆ ಮೂರು ಗುಂಡು ಹಾರಿಸಿದರು. ಬಳಿಕ ಅಲ್ಲಿಯೇ ಇದ್ದ ನನ್ನ ಅಂಕಲ್‌ಗೂ ಗುಂಡು ಹಾರಿಸಿದರು ಎಂದು ಅಸಾವರಿ ಹೇಳಿದ್ದಾರೆ.
ದಾಳಿ ನಡೆದ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇನಾಪಡೆಗಳು ಮತ್ತು ಪೊಲೀಸರನ್ನು ನಿಯೋಜಿಸಲಾಗಿದೆ. ಅಗತ್ಯವಿರುವ ಆ್ಯಂಬುಲೆನ್ಸ್ ಸೇರಿದಂತೆ ಎಲ್ಲಾ ಸೇವೆಗಳನ್ನು ಒದಗಿಸಲಾಗಿದೆ. ಬೈಸರನ್ ಪ್ರದೇಶಕ್ಕೆ ವಾಹನಗಳ ಸಂಪರ್ಕ ಇಲ್ಲ. ಇಲ್ಲಿಗೆ ಪ್ರವಾಸಿಗರು ಕೂಡ ಕಾಲ್ನಡಿಗೆ ಹಾಗೂ ಕುದುರೆಗಳ ಮೂಲಕವೇ ತೆರಳಬೇಕು. ದಾಳಿಯ ಬಳಿಕ ಹುಲ್ಲುಗಾವಲಿಗೆ ಹೆಲಿಕಾಪ್ಟರ್‌ಗಳು ತಲುಪುವ ಮೊದಲೇ ಸ್ಥಳೀಯರು ತಮ್ಮ ಕುದುರೆಗಳ ಮೇಲೆ ಗಾಯಾಳುಗಳನ್ನು ಹೊತ್ತು ತಂದಿದ್ದಾರೆ.