ಮಂಗಳೂರು: ಜಾಮರ್ ತೆಗೆಯುವಂತೆ ಜೈಲಿನ ಮುಂಭಾಗ ಬಿಜೆಪಿಯಿಂದ ಪ್ರತಿಭಟನೆ- ಶಾಸಕ ಕಾಮತ್ ಸೇರಿದಂತೆ ಬಿಜೆಪಿ ಕಾರ್ಯಕರ್ತರು ವಶಕ್ಕೆ
Saturday, April 5, 2025
ಮಂಗಳೂರು: ಜಿಲ್ಲಾ ಕಾರಾಗೃಹಕ್ಕೆ ಅಳವಡಿಸಿರುವ ಜಾಮರ್ ತೆಗೆಯುವಂತೆ ಬಿಜೆಪಿ ವತಿಯಿಂದ ಜೈಲಿನ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಪೊಲೀಸರು ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಪ್ರತಿಭಟನಾಕಾರರನ್ನು ವಶಪಡಿಸಿಕೊಂಡರು.
ಜಾಮರ್ ತೆಗೆಯಲು ಎಚ್ಚರಿಕೆ, ಮನವಿ ನೀಡಿದರೂ, ಯಾವುದೇ ಕ್ರಮ ಆಗಿಲ್ಲದಿದ್ದರಿಂದ ಬಿಜೆಪಿ ಶನಿವಾರ ರಾಸ್ತಾರೋಕ್ ನಡೆಸುವ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಇಂದು ಜೈಲಿನ ಮುಂಭಾಗ ಬ್ಯಾರಿಕೇಡ್ ಅಳವಡಿಸಿ ಮೂರು ಅಂತರಗಳಲ್ಲಿ ಪೊಲೀಸ್ ಭದ್ರತೆ ನಿಯೋಜಿಸಿ, ಪ್ರತಿಭಟನಾಕಾರರು ಜೈಲು ಪ್ರವೇಶಿಸದಂತೆ ಮುನ್ನೆಚ್ಚರಿಕೆ ವಹಿಸಿತ್ತು. ಜೊತೆಗೆ ಜೈಲು ಆಸುಪಾಸಿನಲ್ಲಿ ಪೊಲೀಸ್ ಸರ್ಪಗಾವಲು ವ್ಯವಸ್ಥೆ ಅಳವಡಿಸಲಾಗಿತ್ತು.
ರಾಸ್ತಾರೋಕ್ ಎಚ್ಚರಿಕೆ ನೀಡಲಾಗಿದ್ದರೂ ಜೈಲು ಮುಂಭಾಗ ಪ್ರತಿಭಟನೆಯಷ್ಟೇ ನಡೆಯಿತು. ಮೊದಲು ಶಾಸಕ ವೇದವ್ಯಾಸ ಕಾಮತ್ ಹಾಗೂ ಬಿಜೆಪಿ ಮುಖಂಡ ರವಿಶಂಕರ್ ಮಿಜಾರು ಪ್ರತಿಭಟನಾ ಭಾಷಣ ಮಾಡಿದರು. ಬಳಿಕ ವೇದವ್ಯಾಸ ಕಾಮತ್ ಸೇರಿದಂತೆ ಕೆಲ ಪ್ರತಿಭಟನಾಕಾರರು ಮೊಬೈಲ್‌ಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿ, ಜಾಮರ್ ಕಿತ್ತೆಸೆಯುತ್ತೇವೆ ಎಂದು ಜೈಲಿನೊಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡು ಪೊಲೀಸ್ ವಾಹನದಲ್ಲಿ ಕೊಂಡೊಯ್ದರು.