ಬೆಳ್ತಂಗಡಿ: ತಿಮರೋಡಿ ಚಾಲೆಂಜ್ ಸ್ವೀಕರಿಸಿ ಉಜಿರೆಗೆ ಬಂದ ಪುನೀತ್ ಕೆರೆಹಳ್ಳಿ- ಅರ್ಧದಲ್ಲೇ ತಡೆದು ಹಿಂದೆ ಕಳಿಸಿದ ಪೊಲೀಸರು
Saturday, April 19, 2025
ಬೆಳ್ತಂಗಡಿ: ಸೌಜನ್ಯಪರ ಹೋರಾಟಗಾರ ಮಹೇಶ್ ತಿಮರೋಡಿಯವರ ಚಾಲೆಂಜ್ ಅನ್ನು ಸ್ವೀಕರಿಸಿ ಉಜಿರೆಗೆ ಬಂದ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಯನ್ನು ಪೊಲೀಸರು ಅರ್ಧದಲ್ಲೇ ತಡೆದು ಹಿಂದೆ ಕಳುಹಿಸಿರುವ ಘಟನೆ ನಡೆದಿದೆ.
ಶನಿವಾರ ಸಂಜೆ ಉಜಿರೆಯಲ್ಲಿ ನಡೆಯುವ ರಾಮೋತ್ಸವ ಕಾರ್ಯಕ್ರಮಕ್ಕೆ ಪುನೀತ್ ಕೆರೆಹಳ್ಳಿ ಆಗಮಿಸುತ್ತಿದ್ದರು. ಆದರೆ ದ.ಕ ಜಿಲ್ಲಾ ಪ್ರವೇಶಕ್ಕೆ ದ.ಕ.ಜಿಲ್ಲಾಡಳಿತ ನಿರ್ಬಂಧ ವಿಧಿಸಿದ್ದರು. ಪುನೀತ್ ಕೆರೆಹಳ್ಳಿ ಆಗಮನದಿಂದ ಜಿಲ್ಲೆಯಲ್ಲಿ ಶಾಂತಿ ಕದಡುವ ಸಾಧ್ಯವಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಈ ನಿರ್ಬಂಧ ವಿಧಿಸಿದ್ದರು.
ಸೌಜನ್ಯಪರ ಹೋರಾಟ ವಿಚಾರದಲ್ಲಿ ಪುನೀತ್ ಕೆರೆಹಳ್ಳಿ ಮತ್ತು ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಮಧ್ಯೆ ಸಂಘರ್ಷ ಏರ್ಪಟ್ಟಿತ್ತು. ಆದ್ದರಿಂದ ತಿಮರೋಡಿ ಬಣ 'ಪುನೀತ್ ಕೆರೆಹಳ್ಳಿಗೆ ತಾಕತ್ತಿದ್ದರೆ ಉಜಿರೆ ಬರುವಂತೆ ಚಾಲೆಂಜ್ ಹಾಕಿತ್ತು'. ಸವಾಲು ಸ್ವೀಕರಿಸಿ ಉಜಿರೆಗೆ ಆಗಮಿಸಿದ್ದ ಪುನೀತ್ ಕೆರೆಹಳ್ಳಿ ಮತ್ತು ಮಹೇಶ್ ಶೆಟ್ಟಿ ತಿಮರೋಡಿ ಬಣ ನಡುವೆ ಸಂಘರ್ಷ ಸಾಧ್ಯತೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಪುನೀತ್ ಕೆರೆಹಳ್ಳಿಗೆ ನಿರ್ಬಂಧ ವಿಧಿಸಿತ್ತು.
ಆದ್ದರಿಂದ ಪುನೀತ್ ಕೆರೆಹಳ್ಳಿಗೆ ಉಜಿರೆ ಪ್ರವೇಶಿಸುವ ದಾರಿ ಮಧ್ಯೆ ಪೊಲೀಸರು ಬ್ಯಾರಿಕೇಡ್ ಹಾಕಿ ತಡೆದಿದೆ. ಆಗ ಪೊಲೀಸರು ಮತ್ತು ಪುನೀತ್ ಕೆರೆಹಳ್ಳಿ ಬೆಂಬಲಿಗರ ಮಧ್ಯೆ ವಾಗ್ವಾದ ಉಂಟಾಗಿದೆ. ಸದ್ಯ ಪುನೀತ್ ಕೆರೆಹಳ್ಳಿಗೆ ಪೊಲೀಸರು ನೊಟೀಸ್ ನೀಡಿ ನೆಲ್ಯಾಡಿ ಶಿರಾಡಿ ಘಾಟ್ ಮೂಲಕ ವಾಪಸ್ ಕಳುಹಿಸಿದೆ.