ಬಂಟ್ವಾಳ: ಅಪ್ರಾಪ್ತೆಯನ್ನು ಅತ್ಯಾಚಾರಗೈದು ಗರ್ಭಿಣಿಯನ್ನಾಗಿಸಿದ ಆರೋಪಿ ಅರೆಸ್ಟ್
Wednesday, April 23, 2025
ಬಂಟ್ವಾಳ: ಅಪ್ರಾಪ್ತೆಯ ಇಚ್ಛೆಯ ವಿರುದ್ಧವಾಗಿ ಬಲವಂತವಾಗಿ ದೈಹಿಕ ಸಂಪರ್ಕ ಬೆಳೆಸಿ ಆಕೆ ಗರ್ಭಿಣಿಯಾಗಲು ಕಾರಣನಾದ ಆರೋಪದಲ್ಲಿ ಯುವಕನೊಬ್ಬನ ವಿರುದ್ಧ ಉಪ್ಪಿನಂಗಡಿ ಪೊಲೀಸರು ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.
ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ನಿವಾಸಿ ರಮೇಶ ಬಂಧಿತ ಆರೋಪಿ.
16ರ ಹರೆಯದ ಅಪ್ರಾಪ್ತೆ ಪ್ರಥಮ ಪಿಯುಸಿಗೆ ಶಿಕ್ಷಣ ತೊರೆದು ಮನೆಯಲ್ಲಿದ್ದಳು. ಆಕೆ ದೂರದ ಸಂಬಂಧಿಕನಾದ ರಮೇಶ ಮನೆಗೆ ಫೆಬ್ರವರಿ 10ರಂದು ಹೋಗಿದ್ದಳು. ಅದೇ ರಾತ್ರಿ, ರಮೇಶನು ಆಕೆಯ ಇಚ್ಛೆಗೆ ವಿರೋಧವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಮಾ.9, 27 ಮತ್ತು 28ರಂದು ಸಹ ಆಕೆಯ ವಿರೋಧದ ನಡುವೆಯೂ ದೈಹಿಕ ಸಂಪರ್ಕ ಮುಂದುವರೆಸಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮಾ.29ರಂದು ಸಂತ್ರಸ್ತೆ ಮಕ್ಕಳ ಸಹಾಯವಾಣಿ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಸಹಾಯದಿಂದ ಮಂಗಳೂರು ಕಾವೂರಿನ ಬಾಲಕಿಯರ ಬಾಲಮಂದಿರಕ್ಕೆ ದಾಖಲೆಯಾಗಿದ್ದಾಳೆ. ಎ.1ರಂದು ಆಪ್ತ ಸಮಾಲೋಚಕರಿಗೆ ಘಟನೆಯ ಬಗ್ಗೆ ತಿಳಿಸಿದ್ದಾಳೆ. ಎ.2ರಂದು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆದ ವೈದ್ಯಕೀಯ ಪರೀಕ್ಷೆಯಲ್ಲಿ ಆಕೆ ಗರ್ಭಿಣಿಯಾಗಿರುವುದು ದೃಢಪಟ್ಟಿದೆ.
ಘಟನೆ ಕುರಿತು ಸಂತ್ರಸ್ತ ಬಾಲಕಿ ನೀಡಿದ ದೂರಿನಂತೆ ರಮೇಶನ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ ಉಪ್ಪಿನಂಗಡಿ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.