ಬರೇಲಿ: ಪಾಳುಬಿದ್ದ ಕಟ್ಟಡದಲ್ಲಿ ಅನಾಥವಾಗಿ ಬಿದ್ದಿದ್ದ ಹೆಣ್ಣು ಶಿಶುವನ್ನು ರಕ್ಷಿಸಿದ ನಟಿ ದಿಶಾ ಪಟಾಣಿ ಸೋದರಿ
Tuesday, April 22, 2025
ಬರೇಲಿ (ಉತ್ತರ ಪ್ರದೇಶ): ಬಾಲಿವುಡ್ ನಟಿ ದಿಶಾ ಪಟಾನಿಯವರ ಸೋದರಿ ಖುಷ್ಬೂ ಪಟಾನಿಯವರು ರವಿವಾರ ಬೆಳಗ್ಗೆ ಬರೇಲಿಯಲ್ಲಿ ಪಾಳುಬಿದ್ದ ಕಟ್ಟಡದಿಂದ ಸುಮಾರು 9 ರಿಂದ 10 ತಿಂಗಳ ವಯಸ್ಸಿನ ಅನಾಥ ಶಿಶುವನ್ನು ಗೋಡೆ ಹತ್ತಿ ರಕ್ಷಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿಶಾ ಅವರ ಬರೇಲಿಯ ನಿವಾಸದ ಹಿಂಭಾಗದ ಪಾಳುಬಿದ್ದ ಮನೆಯಲ್ಲಿ ಮಗು ಪತ್ತೆಯಾಗಿದೆ. ಅಲ್ಲಿ ಖುಷ್ಬೂ ತಮ್ಮ ತಂದೆ ನಿವೃತ್ತ ಪೊಲೀಸ್ ವೃತ್ತ ಅಧಿಕಾರಿ ಜಗದೀಶ್ ಪಟಾನಿಯೊಂದಿಗೆ ವಾಸಿಸುತ್ತಿದ್ದಾರೆ. ಖುಷ್ಬೂ ಅವರ ಧೈರ್ಯಶಾಲಿ ನಡೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ.
ಖುಷ್ಬೂ ಬೆಳಗ್ಗೆ ವಾಕಿಂಗ್ ಹೋಗುತ್ತಿದ್ದಾಗ ಹತ್ತಿರದ ಪಾಳುಬಿದ್ದ ಕಟ್ಟಡದಲ್ಲಿ ಮಗುವೊಂದರ ಅಳುವ ಶಬ್ದ ಕೇಳಿಸಿತು. ಆ ಕಟ್ಟಡಕ್ಕೆ ನೇರ ಪ್ರವೇಶವಿರಲಿಲ್ಲ. ಆದ್ದರಿಂದ ಅವರು ಧೈರ್ಯ ಮಾಡಿ ಗೋಡೆ ಹತ್ತಿ ಸ್ಥಳಕ್ಕೆ ತಲುಪಿದರು. ಒಳಗೆ ಒಂದು ಶಿಶು ನೆಲದ ಮೇಲೆ ಬಿದ್ದಿದ್ದು, ಅಳುತ್ತಿತ್ತು. ಶಿಶುವಿನ ಮುಖದ ಮೇಲೆ ಗಾಯಗಳಿತ್ತು", ಎಂದು ನಗರ 1 ವಿಭಾಗದ ವೃತ್ತ ಅಧಿಕಾರಿ ಪಂಕಜ್ ಶ್ರೀವಾಸ್ತವ ಹೇಳಿದ್ದಾರೆ.
ಖುಷ್ಬೂ ಅವರು ಶಿಶುವನ್ನು ತಕ್ಷಣ ಶಿಶುವನ್ನು ಮನೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಬಳಿಕ ಅವರ ಕುಟುಂಬವು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿತು. ಬಳಿಕ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿಶುವನ್ನು ಎಸೆದು ಹೋಗಿದ್ದಾರೆ ಎಂಬುದನ್ನು ಗುರುತಿಸಲು ಪೊಲೀಸರು ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.