ಪುತ್ರಿಯ ಮಾವನೊಂದಿಗೆ ಓಡಿಹೋದ ನಾಲ್ಕು ಮಕ್ಕಳ ತಾಯಿ: ಹೆತ್ತಮ್ಮನ ರಾತ್ರಿಯ ರಹಸ್ಯವನ್ನು ಬಯಲು ಮಾಡಿದ ಪುತ್ರ
Sunday, April 20, 2025
ಇತ್ತೀಚಿನ ದಿನಗಳಲ್ಲಿ ಮಾನವ ಸಂಬಂಧಗಳು ಮೌಲ್ಯವನ್ನು ಕಳೆದುಕೊಳ್ಳುತ್ತಿರುವುದಕ್ಕೆ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂಭಾಗದಲ್ಲಿದೆ. ಕೆಲವರು ಕೇವಲ ದೈಹಿಕ ಸುಖಕ್ಕಾಗಿ ಸಂಬಂಧಗಳನ್ನೇ ಮರೆತು ಪ್ರಾಣಿಗಳಂತೆ ವರ್ತಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಮಹಿಳೆಯೊಬ್ಬಳು ತನ್ನ ಭಾವಿ ಅಳಿಯನೊಂದಿಗೆ ಓಡಿ ಹೋಗಿ ಭಾರಿ ಸುದ್ದಿಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಇದೀಗ ಮತ್ತೊಬ್ವಾಕೆ ತನ್ನ ಪುತ್ರಿಯ ಮಾವನೊಂದಿಗೆ ಅಕ್ರಮ ಸಂಬಂಧ ಬೆಳೆಸಿ, ಪರಾರಿಯಾಗಿರುವ ಸುದ್ದಿ ಭಾರಿ ಚರ್ಚೆಯಾಗುತ್ತಿದೆ.
ಉತ್ತರ ಪ್ರದೇಶದ ಬದೌನ್ ಜಿಲ್ಲೆಯ ದತಗುಂಜ್ ಕೊಟ್ಟಾಲಿ ಪ್ರದೇಶದ ಸುನಿಲ್ ಹಾಗೂ ಮಮತಾಗೆ 2002ರಲ್ಲಿ ವಿವಾಹವಾಗಿದೆ. ಈ ದಂಪತಿಗೆ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯದ್ದಾರೆ. ಸುನಿಲ್ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಅವರು ತಮ್ಮ ಪುತ್ರಿಯನ್ನು ಬದೌನ್ ಜಿಲ್ಲೆಯ ಸದರ್ ಕೊಟ್ಬಾಲಿ ಪ್ರದೇಶದ ಯುವಕನೊಬ್ಬನಿಗೆ ಕೊಟ್ಟು 2022ರಲ್ಲಿ ಮದುವೆ ಮಾಡಿದ್ದರು.
ಈ ಮದುವೆಯ ಬಳಿಕ, ಮಮತಾ ತನ್ನ ಪುತ್ರಿಯ ಮಾವನೊಂದಿಗೆ ಮಮತಾ ಅನೈತಿಕ ಸಂಬಂಧ ಬೆಳೆಸಿದ್ದಾಳೆ. ಇಬ್ಬರ ನಡುವೆ ಸುಮಾರು ಎರಡು ವರ್ಷಗಳಿಂದ ಸಂಬಂಧವಿದೆ ಎನ್ನಲಾಗುತ್ತಿದೆ. ಸುನಿಲ್ ಟ್ರಕ್ ಓಡಿಸುತ್ತಿದ್ದ ಕಾರಣ ತಿಂಗಳಿಗೆ ಕೆಲವು ದಿನಗಳು ಮಾತ್ರ ಮನೆಯಲ್ಲಿರುತ್ತಿದ್ದ. ಸುನಿಲ್ ಇಲ್ಲದಿದ್ದಾಗ, ಪುತ್ರಿಯ ಮಾವ ಶೈಲೇಂದ್ರನು ಅವರ ಮನೆಗೆ ಬರುತ್ತಿದ್ದ. ಬೀಗರಾದ್ದರಿಂದ ಯಾರಿಗೂ ಶೈಲೇಂದ್ರ ಹಾಗೂ ಮಮತಾ ಸಂಬಂಧದ ಬಗ್ಗೆ ಅನುಮಾನ ಬರುತ್ತಿರಲಿಲ್ಲ. ಇದೀಗ ಮಮತಾ ಮತ್ತು ಶೈಲೇಂದ್ರ ಪರಾರಿಯಾಗಿದ್ದು, ಆಗಲೇ ಅವರಿಬ್ಬರು ಮಧ್ಯೆ ಅನೈತಿಕ ಸಂಬಂಧ ಇರುವ ವಿಚಾರ ಎಲ್ಲರಿಗೂ ಗೊತ್ತಾಗಿದೆ.
ಸದ್ಯ, ಘಟನೆಯ ಬಗ್ಗೆ ಸುನೀಲ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ಸಂದರ್ಭ ಮಾತನಾಡಿದ ಸುನೀಲ್, ನಾನು ಬೇರೆ ಗ್ರಾಮದಲ್ಲಿ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತೇನೆ. ಆದರೆ, ನನ್ನ ಪತ್ನಿಗೆ ಸಮಯಕ್ಕೆ ಸರಿಯಾಗಿ ಹಣ ಕಳುಹಿಸುತ್ತೇನೆ. ಕುಟುಂಬದ ಖರ್ಚಿಗೆ ಆಗಾಗ ಹಣ ನೀಡುತ್ತಲೇ ಇದ್ದೆ. ನಾನು ಮನೆಯಲ್ಲಿ ಇಲ್ಲದಿದ್ದಾಗ ನನ್ನ ಹೆಂಡತಿ, ಶೈಲೇಂದ್ರ ಜೊತೆ ಕರೆ ಮಾಡಿ ಮಾತನಾಡಿದ್ದಳು. ಮನೆಗೆ ಬರಲು ಹೇಳುತ್ತಿದ್ದಳು. ಈಗ ಅವರಿಬ್ಬರು ಓಡಿಹೋಗಿದ್ದಾರೆ. ಮನೆಯಲ್ಲಿದ್ದ ಎಲ್ಲ ಆಭರಣ ಮತ್ತು ಹಣವನ್ನು ತೆಗೆದುಕೊಂಡು ಓಡಿಹೋಗಿದ್ದಾರೆ ಎಂದು ತಮ್ಮ ದುಃಖವನ್ನು ತೋಡಿಕೊಂಡರು.
ನಮ್ಮ ತಂದೆ ಮನೆಯಲ್ಲಿ ಇಲ್ಲದಿದ್ದಾಗ ಶೈಲೇಂದ್ರ ನಮ್ಮ ಮನೆಗೆ ಬರುತ್ತಿದ್ದರು. ಅಲ್ಲದೆ, ನನ್ನ ತಾಯಿ ಮೂರು ದಿನಗಳಿಗೊಮ್ಮೆ ಅವರಿಗೆ ಕರೆ ಮಾಡುತ್ತಿದ್ದರು. ಶೈಲೇಂದ್ರ ಮನೆಗೆ ಬಂದಾಗಲೆಲ್ಲ ನಮ್ಮನ್ನು ಬೇರೆ ಕೋಣೆಗೆ ಕಳುಹಿಸುತ್ತಿದ್ದರು. ಇದೀಗ ಇಬ್ಬರು ಓಡಿಹೋಗಿದ್ದಾರೆ ಎಂದು ಸುನೀಲ್ ಅವರ ಪುತ್ರ ಸಚಿನ್ ಹೇಳಿದರು.