-->
ಮೊತ್ತ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಯಕ್ಷಗಾನ 'ವೀರಚಂದ್ರಹಾಸ' ಚಿತ್ರದ ಮೂಲಕ ಹೊಸ ಪ್ರಯೋಗ: ರವಿ ಬಸ್ರೂರು

ಮೊತ್ತ ಮೊದಲ ಬಾರಿಗೆ ಬೆಳ್ಳಿತೆರೆಯಲ್ಲಿ ಯಕ್ಷಗಾನ 'ವೀರಚಂದ್ರಹಾಸ' ಚಿತ್ರದ ಮೂಲಕ ಹೊಸ ಪ್ರಯೋಗ: ರವಿ ಬಸ್ರೂರು

ಮಂಗಳೂರು: ಪ್ರಪಂಚದ ಚಿತ್ರರಂಗದ ಇತಿಹಾಸದಲ್ಲಿ ಪ್ರಥಮ ಬಾರಿ, ಕರಾವಳಿ ಕರ್ನಾಟಕದ ಸಮೃದ್ಧ ಸಾಂಸ್ಕೃತಿಕ ಪರಂಪರೆಯ ಪ್ರತೀಕವಾದ ಯಕ್ಷಗಾನವನ್ನು 'ವೀರ ಚಂದ್ರಹಾಸ' ಚಿತ್ರದ ಮೂಲಕ ಬೆಳ್ಳಿಪರದೆಗೆ ತರಲಾಗಿದೆ. ಏ.18ರಂದು ಇದನ್ನು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಲಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು,  ಇದೀಗ ಕರಾವಳಿಯಲ್ಲಿ ಬಿಡುಗಡೆಗೊಳಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಬೇರೆ ಕಡೆಗಳಲ್ಲೂ ಹಂತಹಂತವಾಗಿ ಬಿಡುಗಡೆಗೊಳಿಸಲಾಗುವುದು ಎಂದು ಖ್ಯಾತ ಸಂಗೀತ, ಚಲನಚಿತ್ರ ನಿರ್ದೇಶಕ ರವಿ ಬಸ್ರೂರು ಹೇಳಿದರು.


ಅವರು ಮಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿ, ನನ್ನ ಅಜ್ಜ ಯಕ್ಷಗಾನ ಕಲಾವಿದರಾಗಿದ್ದು, ಒಮ್ಮೆಲೆ ಐದು ವಾದ್ಯಗಳನ್ನು ನುಡಿಸಬಲ್ಲ ಸಾಮೃಥ್ಯದವರು. ನನ್ನ ತಂದೆ ಸೇರಿ ಇಡೀ ಕುಟುಂಬದಲ್ಲಿ ಎಲ್ಲರೂ ಯಕ್ಷಗಾನ ಕಲಾವಿದರಾಗಿದ್ದಾರೆ. ಯಕ್ಷಗಾನವನ್ನು ಎಲ್ಲೋ ಮಿಸ್ ಮಾಡುತ್ತಿದ್ದೇನೆ ಎಂದೆನಿಸಿತು. ಸುಮಾರು ಹನ್ನೆರಡು ವರ್ಷಗಳ ಮುಂಚೆ ಪ್ರಯತ್ನಿಸಿದ್ದೆ. ಆದರೆ ಆಗ ನನ್ನ ಕಿಸೆಯಲ್ಲಿ ದುಡ್ಡಿರಲಿಲ್ಲ, ಅನುಭವವೂ ಇರಲಿಲ್ಲ. ಆದರೆ ಈ ವರ್ಷ ಅದಕ್ಕೆ ಕಾಲ ಕೂಡಿ ಬಂದಿತು ಎಂದರು.


ಎಲ್ಲರೂ ಇದನ್ನು ಸಿನಿಮಾ ಆಂಗಲ್‌ನಲ್ಲಿ ನೋಡುತ್ತಿದ್ದರು, ಆದರೆ ಇದು ಬರೇ ಸಿನಿಮಾ ಅಲ್ಲ, ಇದು ತುಳುನಾಡಿನ ಕಲೆ. ಆದ್ದರಿಂದ ಇದನ್ನು ಅದೇ ಶೈಲಿಯಲ್ಲಿ ನೋಡಿದರೆ,  ವೀಕ್ಷಕನ ದೃಷ್ಟಿಕೋನ ಬದಲಾಗುತ್ತೆ. ಅದ್ಭುತ ಜ್ಞಾನ ಭಂಡಾರವನ್ನೇ ಹೊಂದಿರುವ ಯಕ್ಷಗಾನವನ್ನು ಯಾಕೆ ಇಷ್ಟಕ್ಕೇ ಸೀಮಿತವಾಗಿಟ್ಟುಕೊಳ್ಳಬೇಕು, ಇದನ್ನು ಪ್ರಪಂಚದ ಮುಂದೆ ತರಬೇಕು ಎನ್ನುವ ನಿಟ್ಟಿನಲ್ಲಿ ಈ ಚಿತ್ರ ರೂಪಿಸಲಾಗಿದೆ. ಬಾಹುಬಲಿಯನ್ನು ಮೀರಿಸುವ ಎಲ್ಲಾ ಲಕ್ಷಣವನ್ನು ಈ ಚಿತ್ರ ಹೊಂದಿದೆ. ಇಲ್ಲಿ ಯಕ್ಷಗಾನ ಮಾತ್ರವಲ್ಲ ಕಲಾವಿದರ ಬದುಕೂ ಕೂಡಾ ಅನಾವರಣಗೊಂಡಿದೆ. 1500 ಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಯಕ್ಷಗಾನ ಕಲೆಯನ್ನು  ವಿಜ್ರಂಭಣೆಯಿಂದ ವಿಶ್ವದ ಮುಂದೆ ಮೆರೆಸುವ ಒಂದು ಪ್ರಯತ್ನ. ಇದು ಕೇವಲ ಮನೋರಂಜನೆ ಉದ್ದೇಶವಷ್ಟೇ ಅಲ್ಲದೆ ಭವಿಷ್ಯದ ಅನೇಕ ಚಿತ್ರಗಳಿಗೆ ದಾರಿ ತೋರುವ, ಪರಂಪರೆ ಉಳಿಸುವ, ಭವಿಷ್ಯದ ಪೀಳಿಗೆಗೆ ನಮ್ಮ ಕಲೆಯನ್ನು ಪರಿಚಯಿಸುವ ಒಂದು ಹೊಸ ಆರಂಭ. ಇದರಲ್ಲಿ ಹೆಚ್ಚಾಗಿ ಯಕ್ಷ ಕಲಾವಿದರೇ ಅಭಿನಯಿಸಿದ್ದಾರೆ‌ ಎಂದರು ರವಿ ಬಸ್ರೂರು. 


ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಯಕ್ಷಗಾನ ಕಲಾವಿದರನ್ನೇ ಬಳಸಿ, ಯಕ್ಷಗಾನೀಯವಾಗಿ ಚಲನಚಿತ್ರವನ್ನು ಹೇಗೆ ಮಾಡಬಹುದು ಎನ್ನುವುದನ್ನು ಬಸ್ರೂರು ತೋರಿಸಿಕೊಟ್ಟಿದ್ದಾರೆ. ಕಾಂತಾರ ಚಲನಚಿತ್ರ ಬಂದ ಮೇಲೆ ದೈವಾರಾಧನೆಗೆ ವಿಶ್ವಮಟ್ಟದ ಮನ್ನಣೆ ಸಿಕ್ಕಿತು. ಅದೇ ರೀತಿ ಈ ಚಿತ್ರದಲ್ಲಿ ಯಕ್ಷಗಾನ ಕಲೆ ಹಾಗೂ ಕಲಾವಿದರಿಗೆ ಈ ಚಿತ್ರದಲ್ಲಿ ಮನ್ನಣೆ ಸಿಕ್ಕಿದೆ. ಈ ಚಿತ್ರದಲ್ಲಿ ನಾನೂ ಒಂದು ಹಾಡನ್ನು ಯಕ್ಷಗಾನ ಶೈಲಿಯಲ್ಲೇ ಹಾಡಿದ್ದು ವಿಶೇಷ. ಈ ಚಿತ್ರದಲ್ಲಿ ಯಕ್ಷಗಾನಕ್ಕೆ ಎಲ್ಲಿಯೂ ಲೋಪ, ಅಪಚಾರ ಆಗದ ಹಾಗೆ ನೋಡಲಾಗಿದೆ. ಮುಂದಿನ ಜನಾಂಗಕ್ಕೆ ಮಾತ್ರವಲ್ಲ ಯಕ್ಷಗಾನದ ಮೇಲೆ ಆಸಕ್ತಿ ಇಲ್ಲದವನೂ ಕೂಡ ಆಸಕ್ತಿ ಬೆಳೆಸುವಂತೆ ಈ ಚಿತ್ರದಲ್ಲಿ ತೋರಿಸಲಾಗಿದೆ ಎಂದರು.


ಖ್ಯಾತ ಯಕ್ಷಗಾನ ಭಾಗವತ ರಾಘವೇಂದ್ರ ಝನ್ಸಾಲೆ ಮಾತನಾಡಿ, ಆರೇಳು ಗಂಟೆ ಇರುವ ಯಕ್ಷಗಾನವನ್ನು ಎರಡೂವರೆ ಗಂಟೆಗೆ ಸೀಮಿತಗೊಳಿಸಲಾಗಿದೆ. ಆದರೆ ಚಿತ್ರದಲ್ಲಿ ಯಕ್ಷಗಾನಕ್ಕೆ ಎಲ್ಲೂ ಲೋಪವಾಗಿಲ್ಲ. ಅವರ ಚಿತ್ರದ ಉದ್ದೇಶ ಉತ್ತಮವಾಗಿದ್ದು, ನಾವದಕ್ಕೆ ಪ್ರೋತ್ಸಾಹಿಸೋಣ ಎಂದರು.

ಭಾಗವತ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ ಸಿನಿಮಾದ ಮೂಲಕ ಯಕ್ಷಗಾನದ ಕಂಪನ್ನು ವಿಶ್ವದೆಲ್ಲೆಡೆ ರವಿ ಬಸ್ರೂರು ಪಸರಿಸಿದ್ದಾರೆ. ನಾವು ಇಲ್ಲಿ ಯಕ್ಷಗಾನ ಶೈಲಿಯಲ್ಲೇ ಭಾಗವತಿಕೆ ಮಾಡಿದ್ದೇವೆ ಎಂದರು.
ರವಿ ಬಸ್ರೂರು ತಂಡದ ಪರಿಶ್ರಮದಲ್ಲಿ ಮೂಡಿಬಂದ ಈ ಚಲನಚಿತ್ರವನ್ನು ಎನ್‌.ಎಸ್‌. ರಾಜಕುಮಾರ್ ನಿರ್ಮಿಸಿದ್ದಾರೆ. ಗೀತಾ ರವಿ ಬಸ್ರೂರು, ಅನೂಪ್ ಗೌಡ, ಅನುಲ್ ಕುಮಾರ್ ಪೂವ್ವಾಡಿ ಸಹ‌ ನಿರ್ಮಾಪಕರಾಗಿ, ರವಿ ಬಸ್ರೂರು ಸಂಗೀತ, ಕಿರಣ್ ಕುಮಾರ್ ಆರ್ ಛಾಯಾಗ್ರಹಣ ಮಾಡಿದ್ದಾರೆ.  ಸ್ಯಾಂಡಲ್ ವುಡ್ ನಟ ಡಾ. ಶಿವರಾಜ್ ಕುಮಾರ್ ಕೂಡಾ ಬಣ್ಣ ಹಚ್ಚಿದ್ದು ಸುಮಾರು 900 ಕಲಾವಿದರಿದ್ದಾರೆ‌. ಪಟ್ಲ ಸತೀಶ್ ಶೆಟ್ಟಿ ಮತ್ತು ಜನ್ಸಾಲೆರಾಘವೇಂದ್ರ ಈ ಸಿನಿಮಾದಲ್ಲಿ ಹಾಡಿದ್ದಾರೆ.

Ads on article

Advertise in articles 1

advertising articles 2

Advertise under the article