ಇನಾಯತ್ ಅಲಿ ನೇತೃತ್ವದ ಗುರುಪುರ ಕಂಬಳಕ್ಕೆ ಅದ್ಧೂರಿ ಚಾಲನೆ ( video)
Saturday, April 12, 2025
ಮಂಗಳೂರು: ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ನೇತೃತ್ವದಲ್ಲಿ ಎರಡನೆಯ ವರ್ಷದ ಗುರುಪುರ ಕಂಬಳ ನಡೆಯುತ್ತಿದ್ದು ಶನಿವಾರ ಅದ್ಧೂರಿ ಚಾಲನೆ ನೀಡಲಾಯಿತು.
ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಶ್ರೀ ಹರಿನಾರಾಯಣ ದಾಸ ಅಸ್ರಣ್ಣ ಕಂಬಳಕ್ಕೆ ಚಾಲನೆಯನ್ನು ನೀಡಿ ಮಾತಾಡಿ, “ನಮ್ಮ ತುಳುನಾಡಿನ ಸಂಸ್ಕೃತಿ ಸಂಪ್ರದಾಯದ ಸೊಗಡನ್ನು ಕಂಬಳದ ಮೂಲಕ ಆಸ್ವಾದಿಸುವ ಮನಸ್ಸನ್ನು ಹೊಂದಿರುವ ತುಳುವರು ತಮ್ಮತನವನ್ನು ದೇಶದ ಯಾವುದೇ ಮೂಲೆಗೆ ಹೋದರೂ ಮರೆಯಲಾರರು” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಂಬಳ ಸಮಿತಿಯ ಗುಣಪಾಲ ಕಡಂಬ ಮಾತಾಡಿ, “ಇನಾಯತ್ ಆಲಿ ನೇತೃತ್ವದಲ್ಲಿ ಸಾಂಸ್ಕೃತಿಕ ಹಾಗೂ ಆಧುನಿಕ ವ್ಯವಸ್ಥೆಗೆ ತಕ್ಕಂತೆ ಸಕಲ ಸೌಲಭ್ಯಗಳು ಉಳ್ಳಂತಹ ಕಂಬಳವನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ” ಎಂದು ಶ್ಲಾಘಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗುರುಪುರ ಕಂಬಳ ರೂವಾರಿ ಇನಾಯತ್ ಅಲಿ ಅವರು ಮಾತಾಡಿ, “ಕಂಬಳ ಕ್ರೀಡೆ ಜಾತಿ ಮತ ಪಂಥಗಳಿಗೆ ಮೀರಿದ ಕ್ರೀಡೆಯಾಗಿದೆ. ತುಳುನಾಡಿನ ಕೃಷಿ ಬದುಕಿನಲ್ಲಿ ಕಂಬಳ ಹಾಸುಹೊಕ್ಕಾಗಿದ್ದು ಅನಾದಿಕಾಲದಲ್ಲಿ ಗುರುಪುರದಲ್ಲಿ ನಡೆಯುತ್ತಿದ್ದ ಕಂಬಳದ ಐತಿಹಾಸಿಕ ದಿನಗಳನ್ನು ಮತ್ತೆ ನೆನಪಿಸುವ ನಿಟ್ಟಿನಲ್ಲಿ ಎರಡನೇ ವರ್ಷವೂ ಎಲ್ಲರ ಸಹಕಾರದಿಂದ ಆಯೋಜಿಸಿದ್ದೇವೆ. ಇದೊಂದು ಸೌಹಾರ್ದ ಕಂಬಳೋತ್ಸವ ಆಗಬೇಕೆನ್ನುವುದು ನಮ್ಮ ಬಯಕೆಯಾಗಿದೆ“ ಎಂದು ಹೇಳಿದರು. ವಿವಿಧ ಕ್ಷೇತ್ರದ ಗಣ್ಯರು ಕಂಬಳಕ್ಕೆ ಆಗಮಿಸಿ ಶುಭ ಹಾರೈಸಿದರು.