
ಮದುವೆಗೆ ಬರಬೇಡಿ ಎಂಬ ವಧು ಮನವಿ ಮಾಡಿರುವ ವೀಡಿಯೋ ವೈರಲ್: ಕಾರಣ ಇದು!
Sunday, January 23, 2022
ಚಾಮರಾಜನಗರ: ರಾಜ್ಯದಲ್ಲಿ ಮತ್ತೆ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಿಗದಿಯಾಗಿರುವ ಮದುವೆಗೆ ಬರಬೇಡಿ ಎಂದು ವಧುವೊಬ್ಬಳು ಮನವಿ ಮಾಡಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಚಾಮರಾಜನಗರ ತಾಲೂಕಿನ ವಿ.ಸಿ.ಹೊಸೂರು ಗ್ರಾಮ ನಿವಾಸಿ ಸುಷ್ಮಾ ವಿವಾಹವು ಚನ್ನಪ್ಪನಪುರದ ನಿವಾಸಿ ಶ್ರೇಯಸ್ ರೊಂದಿಗೆ ನಿಶ್ಚಯವಾಗಿತ್ತು. ಈ ಪ್ರಯುಕ್ತ ನಿನ್ನೆ ಹಾಗೂ ಇಂದು ಮದುವೆ ನಡೆಯಲಿದೆ. ಈಗಾಗಲೇ ಸಂಬಂಧಿಕರಿಗೆ ಮದುವೆ ಆಮಂತ್ರಣ ಪತ್ರಿಕೆಯನ್ನು ಹಂಚಲಾಗಿತ್ತು. ಆದರೆ, ಕೊರೊನಾ ಪ್ರಕರಣದ ಹೆಚ್ಚಳ ಹಿನ್ನೆಲೆಯಲ್ಲಿ ವಧು-ವರರೂ ಮನೆಯಲ್ಲಿಯೇ ಸರಳ ವಿವಾಹ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.
ಕೊರೊನಾ ಸೋಂಕು ಹೆಚ್ಚಳವಾಗದಿದ್ದಲ್ಲಿ ಇವರ ವಿವಾಹವು ಚಾಮರಾಜನಗರದ ಖಾಸಗಿ ಕಲ್ಯಾಣ ಮಂಟಪದಲ್ಲಿ ನೆರವೇರಬೇಕಿತ್ತು. ಆದರೆ ದಿನದಿಂದ ದಿನಕ್ಕೆ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ, ಸರಕಾರ ಸಹ ವಿವಾಹ ಸಮಾರಂಭಗಳಿಗೆ ಇಂತಿಷ್ಟೇ ಜನಸಂಖ್ಯೆ ಇರಬೇಕೆಂದು ನಿಯಮಗಳನ್ನು ಹಾಕಿದೆ.
ಸಾಕಷ್ಟು ಗೊಂದಲಗಳ ಮಧ್ಯೆ ಮಂಟಪದಲ್ಲಿ ಮದುವೆ ಮಾಡುವುದು ಸಮಂಜಸವಲ್ಲ ಎಂಬ ತೀರ್ಮಾನಕ್ಕೆ ಬಂದು ವಧೂ - ವರರ ಎರಡೂ ಕುಟುಂಬವು ವಧುವಿನ ಸ್ವಗೃಹದಲ್ಲೇ ಸರಳವಾಗಿ ವಿವಾಹ ನಡೆಸಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಯಾರೂ ಮದುವೆಗೆ ಬಾರದೆ, ಇದ್ದಲ್ಲಿಯೇ ಆಶೀರ್ವದಿಸಿ ಎಂದು ವೀಡಿಯೋ ಮಾಡಿ ವಧು ಮನವಿ ಮಾಡಿದ್ದಾಳೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದೆ.